ನಾಜಾಫ್
ಇದು ಆನ್-ನಾಜಾಫ್ ಎಂದು ಪ್ರಸಿದ್ದವಾಗಿದೆ. ಮಧ್ಯ ಇರಾಕಿನ ಕಾರ್ಬಲ ಪ್ರಾಂತ್ಯದಲ್ಲಿ, ಕಾರ್ಬಲ ನಗರದಿಂದ ಆಗ್ನೇಯಕ್ಕೆ 72 ಕಿಮೀ. ದೂರದಲ್ಲಿ ಉ.ಅ 31ಲಿ 59 ಮತ್ತು ಪೂ.ರೇ 44ಲಿ 20 ಮೇಲಿರುವ ಒಂದು ಮುಸ್ಲಿಂ ಪವಿತ್ರ ಕ್ಷೇತ್ರ. ಜನಸಂಖ್ಯೆ 1,79,160 (1970). ಬೆಟ್ಟದ ಏಣಿನಲ್ಲಿ (ನಾಜಾಫ್) ಜವುಳು ಮೈದಾನದ ಎದುರಿಗೆ ನಿಂತಿರುವ ಈ ಪಟ್ಟಣದಲ್ಲಿ ಇಸ್ಲಾಂ ಧರ್ಮದ ಶೀಯಾ ಪಂಥದ ಪ್ರವರ್ತಕರಾದ ಅಲಿ ಇಬ್ನ್ ಅಬಿ ತಾಲಿಬರ ಸಮಾಧಿ ಇರುವುದರಿಂದ ಇದು ಈ ದೇಶದ ಎರಡು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ (ಇನ್ನೊಂದು ಕಾರ್ಬಲ). ಬಾಗ್‍ದಾದಿನ ಖಲೀಫ್ ಹರೂನ್ ಆಲ್ ರಶೀದ 791ರಲ್ಲಿ ಈ ಸಮಾಧಿಯನ್ನು ಕಟ್ಟಿಸಿದನೆಂದು ಪ್ರತೀತಿ. 10ನೆಯ ಶತಮಾನದ ಅನಂತರ ಪಟ್ಟಣ ವಿಶೇಷವಾಗಿ ಬೆಳೆಯಿತು. ಸಮಾಧಿಯಂತೆ ಊರಿನ ಪ್ರಾಚೀನ ಕೋಟೆ ಗೋಡೆಯೂ ಉಳಿದಿದೆ.

ನಾಜಾಫ್ ಮೊದಲಿನಿಂದಲೂ ಬಾಗ್‍ದಾದಿನ ಕೇಂದ್ರ ಸರ್ಕಾರದ ವಿರುದ್ಧ ಬಂಡಾಯ ಹೂಡುವ ರಾಜಕೀಯ ಪ್ರತಿದ್ವಂದಿಗಳ ಆಶ್ರಯಸ್ಥಾನವಾಗಿದೆ. ನಗರದ ವಸತಿ ಪ್ರದೇಶದಲ್ಲಿ ಇಕ್ಕಟ್ಟಾದ ಓಣಿಗಳೂ ಅವಕ್ಕಿಂತ ಹೆಚ್ಚಾಗಿ, ಮನೆಗಳ ಕೆಳಗೆ, ಬೇಸಗೆಯಲ್ಲಿ ತಂಪಾದ ಆಶ್ರಯಕ್ಕಾಗಿ ನಿರ್ಮಿಸಿದ ಆಳವಾದ ನೆಲ ಮನೆಗಳೂ ಅವುಗಳಿಂದ ಊರ ಹೊರಕ್ಕೆ ಹೋಗಲು ರಚಿಸಿರುವ ಸುರಂಗಮಾರ್ಗಗಳೂ ಇದ್ದು ತಲೆಮರೆಸಿಕೊಂಡ ರಾಜದ್ರೋಹಿಗಳಿಗೆ ಈ ನಗರ ಒಂದು ಅನುಕೂಲ ನೆಲೆಯಾಗಿದೆ.	
	(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ